ಜಗ - ಜೀವ ಜಾಲ


ಜಗ-ಜೀವ-ಜಾಲ


ಅರಸೊತ್ತಿಗೆ ಇದ್ದ ಕಾಲದಲಿ
ಊರೂರಿಗೊಂದೊಂದು
ಕೆರೆ ಕುಂಟೆ ಬಾವಿ;
ತಡೆಯಿಲ್ಲದೆ ಮಂಜೂರು
ಅದಕಾಗಿ ನೆಡೆದಿತ್ತು ಆ ಜನರ
ತ್ರಿವಿಧದ ದಾಸೋಹ
ಕೆರೆ ಕಟ್ಟಿ ನೀರುಣಿಸಿ
ತಾವೂ ತಣಿದ ಮಂದಿ
ಧನ್ಯರಾದರು ಅಂದಿಗೆ,

ಜನರೇ ಪ್ರಭುಗಳಾದ ಕಾಲಕ್ಕೆ
ಊರೂರಿನಲ್ಲೂ ಕೆರೆ ಕುಂಟೆ
ಮುಚ್ಚಿಸಲು, ಕಟ್ಟಡ ಕಟ್ಟಿಸಲು
ಕೋಟಿ ಕೋಟಿಗಳ ಅನುದಾನ
ನಡೆದಿವೆ ಅದಕಾಗಿ ದೈತ್ಯ ಯಂತ್ರಗಳ
ಶ್ರಮದಾನ,
ಕಟ್ಟಡ ಕಟ್ಟಿಸಿ, ಹಣ ಎಣಿಸಿಕೊಂಡ ಮಂದಿ
ಧನ್ಯರಾದರು ಇಂದಿಗೆ.

ಬೆಟ್ಟ ಗುಡ್ಡಗಳನ್ನೇ ಬಳಿದು ತಿಂದು
ಜೀರ್ಣಿಸಿಕೊಳ್ಳುವ ರಕ್ಕಸ ಸಂಸ್ಕೃತಿಯ
ಹೊಟ್ಟೆಬಾಕರು ಕಾಡು ಮೇಡುಕೊಳ್ಳಗಳನ್ನೇ
ಕೊಳ್ಳೆ ಹೊಡೆದು ಅಗಿದು ನುಂಗಿ ಬಿಡುವ
ಮಹನೀಯರು
ಮಿಲಿಯಾಂತರ ವರುಷಗಳ
ತವನಿಧಿ
ಜಲಮೂಲಗಳ ಬಗೆದು ಬರಿದು ಮಾಡಿದ
ಮಹಾಪ್ರಭುಗಳು,
ಭವಿತವ್ಯದಲಿ ಮಾಡುವರೇನು?
ಕಾಳು ಮೊಳೆಯದ ಬರಡು ಭೂಮಿಯಲಿ
ಕೊರಡು ಕೊನರದ ಒಣ ಜಾಗದಲಿ
ಸ್ಸ್ಥಾಪಿಸುವರಾವ
ಪ್ರೇತ ಸಾಮ್ರಾಜ್ಯ?

ಗ್ರಹ ತಾರೆಗಳ ಮೀಟಿ ಬಂದವ
ಮಹಾ ಮೇಧಾವಿ
ಸಾಗರ ತಳವ ಶೋಧಿಸಿದವನೊಬ್ಬ
ಪರಾಕ್ರಮಿ
ಜಗವನ್ನೆ ಉಡಾಯಿಸಬಲ್ಲ
ಜ್ಞಾನ ಪಡೆದವನೊಬ್ಬ
ವಿಜ್ಞಾನಿ- ಎಲ್ಲರೂ ಮಹನೀಯರೇ!
ಇವರಲ್ಲಾರೂ
ತುಣುಕು ಭೂಮಿಯನ್ನು ಸ್ವಂತ ರಚಿಸಲಾರರು!
ಬೆಟ್ಟ ಗುಡ್ಡಗಳನು ಮರಳಿ ಮಾಡಲಾರರು
ಪ್ರಕೃತಿಯ ಹೊರತಾಗಿ ಸೃಜಿಸಲಾರರು
ಒಂದು ಹನಿ ನೀರು
ಹನಿ ನೀರನ್ನೂ ಸೃಜಿಸಲಾರದ
ಮನುಜ, ಪ್ರಕೃತಿಯ ಮುಂದಿನ
ಸಣ್ಣಕಣ-ಹುಲುಮಾನವ!

ಮಾನವ ಬದುಕಲು ಬೇಕೇ ಬೇಕು
ಒಂದು ಜೀವಜಾಲ
ಬೆಟ್ಟಗುಡ್ಡ ಕಾಡು ಮೇಡು
ಕ್ರಿಮಿಕೀಟ ಪಶುಪಕ್ಷಿ
ಮಣ್ಣು ನದಿ-ಕೆರೆಗಳ ಮೂಲ
ಇದ ಮರೆತು ಮಲೆತು ನಡೆದವಗೆ
ಇಲ್ಲ ಉಳಿಗಾಲ;
ಇಹ ಪರಗಳೆರಡರಲ್ಲೂ ಇಲ್ಲ ಉಳಿಗಾಲ.

ಎಲ್.ಎನ್. ವಸುಂಧರಾ ದೇವಿ.