ಒಮ್ಮೆ ಕಣ್ಣು ಮುಚ್ಚಿ
ಗತದ ಹಾಳೆಯ
ಹಿಂತಿರುಗಿ ನೋಡಿದರೆ,
ಒಡಲ ಚೀಲದೊಳಗೆ
ಹುದುಗಿ ತಲೆಮಾತ್ರ ಹೋರಹಾಕಿ
ಕಣ್ಣು ಪಿಳುಕಿಸುವ
ಕಾಂಗರೂ ಮರಿಯಂತೆ ಕಂಡದ್ದು;
ಅಪ್ಪ ಹೊದ್ದು ಕುಳಿತ
ಬೆಚ್ಚನೆ ಕೌದಿಯೊಳಗೆ
ಅವಿತು ಕುಳಿತ ನನ್ನದೇ ಮುಖ,
ಹೇಳಿ, ಹೇಳಿಸಿ, ತಿದ್ದಿ, ತದ್ದಿಸಿ
ಬರೆಸಿದ್ದ ಉತ್ತಲೇಖನ – ಅಲ್ಲ
ಉಕ್ತ ಲೇಖನದ
ರಾಶಿ ರಾಶಿಪದಗಳ ನಕ್ಷೆ;
ಬದುಕಿನ ಹೆಜ್ಜೆ ಹೆಜ್ಜೆಗೂ
ನನ್ನ ಜತೆಯಲ್ಲೇ ಇದ್ದು
ನಾನಾಡಿದ, ಬರೆದ, ಅನುಭವಿಸಿದ
ಎಲ್ಲಾ ಪದಗಳೂ
ಮರುಕಳಿಸಿದ ಉಕ್ತಲೇಖನ ರೂಪದಿ
ಅಪ್ಪ ನೀಡಿದ ಭಿಕ್ಷೆ.
ಮನೆ ಮುಂದಿನ ಉದ್ದನೆ
ಹಟ್ಟಿಯಲ್ಲಿ ಚಾಪೆ ಹಾಸಿ ಕೂತು
ಅಪ್ಪನ ಜೊತೆ ಚುಕ್ಕಿಗಳನೆಣಸಿ
ಚಂದಿರನ ಮನೆ ಕದ ತಟ್ಟಿದ್ದು;
ಭಾರತ ರಾಮಾಯಣದ ಪ್ರಸಂಗಗಳನು
ನನ್ನ ಅರಳು ಕಂಗಳ ಮುಂದೆ
ಅಪ್ಪ ಜೀವ ತುಂಬಿದ ದೃಶಕಾವ್ಯವಾಗಿಸಿದ್ದು
ಮನಸಿನ ಮೂಲೆಯಲಿ ಕಲ್ಪನೆಗಳ
ಬೀಜ ನೆಟ್ಟಿದ್ದು, ಉತ್ತೇಜನದ ನೀರೆರೆದಿದ್ದು,
ಓದು ಓದೆಂಬ ಓದಿನ ಹುಚ್ಚಿಗೆ
ನನ್ನ ಹಚ್ಚಿದ್ದು
ಎಲ್ಲ,
ಎಲ್ಲಾ ನೆನ್ನೆ ಮೊನ್ನೆಯ ಹಾಗೆ!
ಮನೆಮಾಡಿನ ಹೊರಗೆ
ಗುಬ್ಬಚ್ಚಿ ಕಟ್ಟಿದ ಗೂಡು
ಬೆಳಕಾಗುತ್ತಲೆ ಶುರುವಾದ
ಹಕ್ಕಿಗಳ ಚಿಲಿಪಿಲಿ ಹಾಡು;
ಊರಾಚೆಯ ಬೆಟ್ಟಕಲ್ಲು ಗುಡ್ಡ ಕಾಡು
ಗಿಡ ಮರ ಕೆರೆ ಕುಂಟೆಗಳಿಗೂ
ನನಗೂ ಬೆಸೆದಿಟ್ಟ
ಆಪ್ತಥಾ ಭಾವದ ಹಾಡು,
ಸುತ್ತಲಿನ ಬದುಕಿನ ಗಡಿಯೊಳಗೇ
ಅವಿತಿರುವ ಮತ್ತೊಂದು
ಅನನ್ಯ ಬದುಕಿನ ಜಾಡು
ತೋರಿದ
ಅಪ್ಪ ಇಂದೆಲ್ಲಿ?
ಕಣ್ಣುಕ್ಕಿ ಬಂದ ಭಾವಕೆ ಕಣ್ಣು ತೆರೆದರೆ
ಎದುರಿಗೆ
ಟೈಸೂಟು ಬೂಟು ಧರಿಸಿದ
ಇಂದಿನ ಸಾಫ್ಟ್ವೇರ್ ಹಾರ್ಡ್ವೇರ್
ಅಪ್ಪಂದಿರು!
ಮಕ್ಕಳ ಮುಂದೆ
ಹಣದ ನೆಲಹಾಸು ಹಾಸಿ
ಟಿ.ವಿ, ಕಂಪ್ಯೂಟರ್ ಬೈಕುಕಾರು
ಬೇಡಿದ್ದೆಲ್ಲವನ್ನು ಬೇಡುವ
ಮುಂಚೆಯೇ ತಂದಿಟ್ಟಾರು.
ಜಗಮಗಿಸುವ ದೀಪಗಳ
ನಗರದ ಕೌತುಕ ಲೋಕವನ್ನೇ
ಅವರ ಮುಂದೆ ತೆರೆದಿಟ್ಟಾರು,
ಹಣದ ಮುಂದೆ ಜಗವೂ ದಾಸತಾನೇ?
ಆದರೆ!
ನನ್ನಪ್ಪ ಬರೀ ನೇಕಾರ
ಹಾಸಲಿಲ್ಲ ಹಣದ ಕಂತೆ
ತೋರಲಿಲ್ಲ ಕೊಳ್ಳುಬಾಕ ಸಂತೆ
ಆದರೂ ಕೊರತೆಯಾಗಲಿಲ
ಮನದರಿವಿನ ವಿಸ್ತಾರಕೆ
- ಎಲ್.ಎನ್.ವಸುಂಧರಾ ದೇವಿ
0 comments:
Post a Comment